Saturday, December 4, 2010

ತಲೆಹರಟೆ !!

                          ಇನ್ನೂ ಮುಗಿಯದ ಮಳೆಗಾಲದ ಮಧ್ಯದ ಮಳೆಯಿಲ್ಲದ ಒಂದು ಮುಸ್ಸಂಜೆ ಹೊತ್ತು. ಅಮ್ಮ ಕರಿದು ಕೊಟ್ಟ ಹಲಸಿನ ಹಪ್ಪಳದ ಜೊತೆ ಕಾಯಿಸುಳಿ, ಸಕ್ಕರೆ ಸೇರಿಸಿದ ತಟ್ಟೆಯನ್ನು ಜೊತೆಯಲ್ಲಿಟ್ಟುಕೊಂಡು terraceಗೆ ತಂದು ಅವನ್ನೆಲ್ಲಾ ಮುಂದಿಟ್ಟು ಕೂತೆ. ಮನೆಯಲ್ಲಿದ್ದವರೂ ಒಬ್ಬೊಬ್ಬರಾಗಿ ಬಂದು, ಸುತ್ತ ಕೂತು ತಟ್ಟೆಯಲ್ಲಿದ್ದುದನ್ನು ಖಾಲಿ ಮಾಡುವ ಕೆಲಸಕ್ಕೆ ಕೈ ಹಾಕಿದರು. ಮಬ್ಬುಗತ್ತಲೆಯಲ್ಲಿ ಮೆಲ್ಲನೆ ಬೀಸುವ ಗಾಳಿಯ ರಾಗಕ್ಕೆ ಹಪ್ಪಳ ಮುರಿಯುವ ಟಕ್ ಟಕ್ ಸದ್ದಿನೊಂದಿಗೆ ಕುರುಂ ಕುರುಂ ಎಂದು ಜಗಿಯುವ ಶಬ್ಧವೂ ಪೈಪೋಟಿಯಿಂದ ತಾಳ ಹಾಕಿ ಜುಗಲ್ಬಂಧಿ ನಡೆಸಿತ್ತು.                  
                     ಅಲ್ಲಿ ಹಪ್ಪಳ ತಿನ್ನುವ ಒಂದೇ ಕೆಲಸ ನಡೆದಿದ್ದರೆ ಈ ಲೇಖನವೇ ಹುಟ್ಟುತ್ತಿರಲಿಲ್ಲ. ಹಪ್ಪಳದ ಜೊತೆ ಅಲ್ಲಿ ನನ್ನ ತಂಗಿ ತಿಂದಿದ್ದು ನನ್ನ ತಲೆಯನ್ನೂ.... "ಅಕ್ಕಾ, ನೀ ಬರೆಯುವ ಕವನಗಳಿಗಿಂತಲೂ ನಿನ್ನ ಲೇಖನಗಳೇ ಚೆನ್ನಾಗಿರುತ್ತವೆ" ಎಂದು ಚರ್ಚೆಗೆ ಮುನ್ನುಡಿ ಇಟ್ಟಳು. "ಬರೆಯುವಲ್ಲಿ ಅವಳದಿನ್ನೂ ಪ್ರಾರಂಭ ಅಷ್ಟೆ, ಕೊನೆಯಲ್ಲ. ಕೊರತೆಗಳ ತುಂಬಿಕೊಳ್ಳಲು ಇನ್ನೂ ಕಾಲಾವಕಾಶವಿದೆ." ಎಂದು ಹೇಳುತ್ತಾ ಪಪ್ಪಾ ಕೈ ಕೊಡವಿಕೊಂಡು ಎದ್ದು ಹೋದರು. ಮತ್ತೆ ಅಲ್ಲಿ ಉಳಿದಿದ್ದು ಮೀಸೆ ಇಲ್ಲದವರ ಪರ-ವಿರೋಧ, ಅಭಿಪ್ರಾಯಗಳ ಮೀಮಾಂಸೆ. ವಿಷಯ ಇತ್ಯರ್ಥವಾಗಲಿಲ್ಲ. ಹಪ್ಪಳವೆಲ್ಲ ಮುಗಿದಮೇಲೆ ನನ್ನ ಬಳಿ ಉಳಿದದ್ದು ಖಾಲಿ ತಟ್ಟೆ ಮತ್ತು ಅವಳು ನನ್ನ ತಲೆಯಲ್ಲಿ ಬಿಟ್ಟ ಗುಂಗಿ ಹುಳು. ತಂಗಿ ಹೇಳಿದ್ದೂ ನಿಜ. ಆದರೆ ಇದಕ್ಕೆ ಕಾರಣ?.......
                     ಹಗಲುಗನಸುಗಳು ನನ್ನ ಹೆಗಲೇರಿ ಕುಳಿತುಕೊಳ್ಳುವಷ್ಟು ನಾನು ಭಾವ ಜೀವಿಯಲ್ಲ. ಮನದಲ್ಲೇಳುವ ಪ್ರತಿ ತರಂಗಗಳಿಗೂ ಮೂಲ ಹುಡುಕಲೂ ಹೋಗುವುದಿಲ್ಲ. ಅದಕ್ಕೇ ಇರಬೇಕು, ನನ್ನ ಪ್ರತಿ ಎದೆ ಬಡಿತದ ಕಾರಣಗಳನ್ನು ಶಬ್ದರೂಪದಲ್ಲಿ ತರುವಾಗ ನಾ ಗೆಲ್ಲುವುದಿಲ್ಲ. ಒಮ್ಮೊಮ್ಮೆ ಕಲ್ಪನೆಗಳೂ ನನಗೆ ಕೈ ಕೊಡುತ್ತವೆ. ಕಾವ್ಯಗಳನ್ನು ಓದುವ ಹವ್ಯಾಸ ಕಡಿಮೆ ಇರುವುದೂ ಇವಕ್ಕೆಲ್ಲಾ ಕಾರಣವೇನೋ ಎಂದು ನನ್ನನ್ನು ನಾನೇ ಸಮಾಧಾನಿಸಿಕೊಂಡೆ. 
                     ನಿಜ ಹೇಳಲೇ, ಕೆಲವು ಕವಿತೆಗಳ ಎಲ್ಲಾ ಮಗ್ಗಲುಗಳೂ ನನಗರ್ಥವಾಗುವುದಿಲ್ಲ. ಹಾಗೆಂದು ಅಂಥ ಕವಿತೆಗಳು ಮುಗ್ಗಲುಗಳು ಎಂದೇನೂ ನಾ ಅಂದುಕೊಳ್ಳುವುದಿಲ್ಲ. ಶಬ್ದಗಳನ್ನು ಅರ್ಥದ ಮೂಲಕ ಹೊಂದಿಸಲು ಅಸಮರ್ಥಳಾದಾಗ ಬರೆದವರ ಈ ಕವಿತೆ ಅತ್ಯಂತ ಮೇಲ್ಮಟ್ಟದ್ದಾಗಿದೆ, ಅದಕ್ಕೇ ನನಗರ್ಥವಾಗಲಿಲ್ಲ ಎಂಬ conclusionಗೆ ಬರುತ್ತೇನೆ. ನನಗದು ತಿಳಿಯಲಿಲ್ಲವೆಂದು ಬರೆದವರ ಬಳಿ ಹೇಳಿಕೊಳ್ಳಲೂ ಕಸಿವಿಸಿಯ ತೆರೆ ಬೇರೆ. ಬರೆದವರೋ ಜಾಣರು, ಕೇಳಿದ ಕೂಡಲೇ ಅವರ ಮನಸ್ಸಿನ ತಲ್ಲಣದ ಎಲ್ಲಾ ಪುಟಗಳನ್ನೂ ತೆರೆದು ತೋರುತ್ತಾರೆಯೇ? ಅದನ್ನು ಬಿಚ್ಚಿಟ್ಟ ಹಾಗೆ ಮಾಡಿ, ಮುಚ್ಚಿಟ್ಟು ಕಾಡುತ್ತಾರೆ! ಈ ಕಬ್ಬಿಣದ ಕಡಲೆಯಾಗುಳಿದ ಕವಿತೆಗಳನ್ನು ಕಂಡಾಗಲೆಲ್ಲಾ ಖ್ಯಾತ ಚಿತ್ರಕಾರರು ಅವರಿಚ್ಛೆಯಂತೆ ಗೆರೆ ಗೆರೆಗಳಿಂದ ಗೀಚಿ, new art ಎಂದು ನಾಮಕರಣ ಮಾಡಿದ, ಲಕ್ಷಾಂತರ ರೂಪಾಯಿ ಗಳಿಸುವ ಸಾಮರ್ಥ್ಯವಿರುವ, ನನಗರ್ಥವಾಗದ ಅವರ ಕಲ್ಪನೆಯ ಚಿತ್ರವೇ ನನ್ನ ಕಣ್ಮುಂದೆ ಕುಣಿಯುತ್ತದೆ.
                      ಎಲ್ಲಾ ಗೋಜಲು. ಸರಳ, ಸ್ಪಷ್ಟ, ಸುಂದರ, ಸಹ್ಯ ಕವನಗಳು ಮಾತ್ರ ಸಧ್ಯಕ್ಕೆ ನನ್ನನ್ನು ಆಪೋಶನ ತೆಗೆದುಕೊಳ್ಳುತ್ತಿವೆ. ಇನ್ನುಳಿದವೆಲ್ಲ ನನ್ನ ಪಾಲಿಗೆ ಬಿಡಿಸಲಾರದ ಗಂಟುಗಳು. ಅವರು ಬೀಜಗಣಿತ, ರೇಖಾಗಣಿತಗಳನ್ನೂ ಬಿಡದೇ ತಮ್ಮ ಕಲ್ಪನೆಯ ಕದ ತೆರೆದು ತೋರಿದ ಕವನಗಳು, ಅವುಗಳಿಗೆ ತತ್ವ ಶಾಸ್ತ್ರ, ನೀತಿ ಶಾಸ್ತ್ರ, ಮನಃ ಶಾಸ್ತ್ರಗಳನ್ನೂ ಮೀರಿದಂತೆ ಬರುವ ಅಸಾಧಾರಣ ಪ್ರತಿಕ್ರಿಯೆಗಳು.....! ಇವೆಲ್ಲವನ್ನೂ ಕಣ್ ಪಿಳುಕಿಸದೇ ನೋಡುತ್ತೇನೆ. 
                          ಒಟ್ಟಿನಲ್ಲಿ... ನಾನೀ ಬರೆಹ ಪ್ರಪಂಚಕ್ಕೆ ಈಗಷ್ಟೇ ಮೊಟ್ಟೆಯೊಡೆದು ಹೊರಬಂದ ಮರಿಯಂತಿದ್ದೇನೆ. ಆಚೀಚೆಯ blogಗಳಿಂದಲೂ ಗುಟುಕು ಸಿಗಬಹುದೇನೋ ಎಂದು ಕತ್ತು ಹೊರಳಿಸಿ ಕುತೂಹಲದಿಂದ   ಇಣುಕುತ್ತೇನೆ.  ಸಧ್ಯದ ಪರಿಸ್ಥಿತಿಯಲ್ಲಿ , ನನ್ನ commentಗಳೋ ಕವನ ಬರೆದವರೇ ಕಿತ್ತು ಬಿಸಾಡುವಷ್ಟು ಬಾಲಿಶ. ಶಿವ ಶಿವಾ...! ಏನೇ ಆದರೂ, ಮರಳಿ ಯತ್ನವ ಮಾಡು ಎನ್ನುವ ನಿರ್ಣಯದೊಂದಿಗೆ ಮತ್ತೆ ಅಖಾಡಕ್ಕಿಳಿಯುತ್ತೇನೆ. ಒಟ್ಟಾರೆಯಾಗಿ ಈ ಕೊರತೆಗಳನ್ನೆಲ್ಲ ತುಂಬಿಕೊಂಡು ನಾನೀ ಪ್ರಪಂಚಲ್ಲಿ ಬೆಳೆಯಬೇಕು, at-least ಹೃದ್ಯವಾಗಿ, ಪ್ರಬುದ್ಧವಾಗಿ ಪ್ರತಿಕ್ರಿಯೆ ನೀಡುವಷ್ಟಾದರೂ....
                      ಆ ದೂರದ ಬೆಟ್ಟವನ್ನು ಮುಟ್ಟಲು ಭಗೀರಥನಂತೆ ನನ್ನ ಪ್ರಯತ್ನ ನಡೆದೇ ಇರುತ್ತದೆ. 
                      ಯಶಸ್ವೀ ಭವ ಎನ್ನಿ ಮತ್ತೆ !!