Wednesday, March 16, 2011

ಮರೆಯಾಗುತ್ತಿರುವ ನೆನಪಿನ ಒಂದು ಪುಟ..

ಎಲ್ಲರೂ ಪ್ರವಾಸ ಕಥನ ಬರೆಯುತ್ತಾರೆ. ನನಗೂ ಅನ್ನಿಸುತ್ತಿತ್ತು ನಾನೂ ಬರೆಯಬೇಕೆಂದು. ಆದರೆ ಎಲ್ಲಿಂದ ಬರೆಯಲಿ? ಯಾವ ಪ್ರವಾಸದ ಬಗ್ಗೆ ಬರೆಯಲಿ? ಮೊದಲು ನನ್ನ ಮನದ ಮೂಲೆಯಲ್ಲೆಲ್ಲೋ ಮರೆಯಾಗುತ್ತಿರುವ ನೆನಪಿನ ಒಂದು ಪುಟವನ್ನು ಈಚೆ ಎಳೆಯಲೇ??

ತುಂಬಾ ಹಿಂದೆ, ನಾನು ಶಾಲೆ ಸೇರಿದ ಶುರುವಿನಲ್ಲೆಲ್ಲೋ ಪ್ರವಾಸವೊಂದರ ಮುನ್ನುಡಿ ಬರೆದಿದ್ದೆ. ಅದು ನನ್ನ ಮನದ ಮೂಲೆಯಿಂದ ಮಸುಕಾಗುವ ಮೊದಲೇ ಅದನ್ನು ದಾಖಲಾಗಿಸಬೇಕೆನ್ನಿಸಿದೆ. ಅಮ್ಮನೂ ನನ್ನೀ ನೆನಪಿನ ಅರೆಬರೆ ಚಿತ್ತಾರಕ್ಕೆ ಜೀವ ತುಂಬುತ್ತಾಳೆ, ಬಣ್ಣವಾಗುತ್ತಾಳೆ, ಜೊತೆಯಲ್ಲಿ ಗೇಲಿ ಮಾಡಿ ನಗುತ್ತಾಳೆ ಕೂಡ..


ನಾನು ನನ್ನ ಮೊದಲ ಹೆಜ್ಜೆಯಿಟ್ಟ ಜಾಗ 'ಬಾದಾಮಿ'. ನನ್ನೊಳಗೇ ಜೀವಂತವಾಗಿ ಉಳಿದುಹೋದ ಆ ದಿನಗಳು.. ನಮ್ಮ ಸ್ವರ್ಗ ಅಲ್ಲಿಯೇ ಸೃಷ್ಟಿಯಾಗಿತ್ತು. ಕಾಲನಿಯಲ್ಲಿನ ಬದುಕು, ಕಣ್ಣಿಗೆ ನಿದ್ದೆ ಕಮರಿಕೊಳ್ಳುವವರೆಗೂ ಆಟದ ಓಟ. ಮನೆಯಿಂದ ಎಡವಿಬಿದ್ದರೆ ಶಾಲೆ. ವಾಣಿ, ವೀಣಾ, ವಿದ್ಯಾ, ಮುನ್ನಾ, ಶರತ್, ಅರವಿಂದ್ ನನ್ನೊಂದಿಗೇ ಶಾಲೆಗೇ ಹೋಗುವವರು. 


ಅದೊಂದು ದಿನ ನಮ್ಮ ಶಾಲೆಯಿಂದ ಪ್ರವಾಸವೆಂದು declare ಮಾಡಿದ್ದರು. ನಮಗೋ ಸಂಭ್ರಮ. ಕಾಲನಿಯಲ್ಲಿಯೇ ಇರುವ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತು ನಾಳಿನ ಪ್ರವಾಸದ ತಯಾರಿ ಮಾಡಿದ ನೆನಪು. ಚೀಟಿಯಲ್ಲಿ "ನಮ್ಮ ಪ್ರವಾಸಕ್ಕೆ ಜೈ" ಎಂದು ಗೀಚಿ ಮಡಚಿಟ್ಟುಕೊಂಡಿದ್ದು, ನಾಳೆ ಯಾವ ಅಂಗಿ ಹಾಕಿಕೊಳ್ಳುವುದು, ಯಾವ bag ತರುವುದು, ಡಬ್ಬಿಗೆ ಅಮ್ಮ ಏನೇನೆಲ್ಲ ತುಂಬುತ್ತಾಳೆ ಎಲ್ಲವೂ ಚರ್ಚೆಯ ವಿಷಯವಾಗಿತ್ತು. "ನಾವೆಲ್ರೂ ಒಟ್ಗೇ ಇರೋಣು, ಕೈ ತಪ್ಪಿಸ್ಕೊಂಡೀರ್ ಮತ್ತ...". ನಾವೆಲ್ಲೋ ದೂರ ಕಾಶಿ ಕೇದಾರದಂತಹ ಗೊತ್ತಿಲ್ಲದ ಸ್ಥಳಕ್ಕೆ ಹೋಗುತ್ತಿದ್ದೇವೇನೋ ಅನ್ನುವ ಹಾಗೆ ವಿದ್ಯಾಳ ಜವಾಬ್ದಾರಿಯುತ ಸಲಹೆ ಬೇರೆ. ಸೂರ್ಯ ಮುಳುಗಿ ಕತ್ತಲಾಗಿದ್ದರೂ ನಮ್ಮ ಉತ್ಸಾಹದ ಸೂರ್ಯ ಮುಳುಗಿರಲಿಲ್ಲ. ಎಲ್ಲ ಅಮ್ಮಂದಿರೂ ನಮ್ಮ ಜೋರು ತಯಾರಿಯನ್ನು ನೋಡಿ ಮುಸಿಮುಸಿ ನಗುತ್ತಿದ್ದರು.

ಬೆಳಗಾದರೆ ಪ್ರವಾಸ. ಆ ರೋಮಾಂಚನದಲ್ಲಿ ರಾತ್ರಿ ಮಲಗುವವರೆಗೂ ಅಮ್ಮನ ತಲೆ ತಿಂದಿದ್ದೆ. ಬೆಳಿಗ್ಗೆ ಕೆಂಪು-ಕಪ್ಪು ಬಣ್ಣದ frock ಸಿಕ್ಕಿಸಿಕೊಂಡು (ಹುಳು ತಿಂದ photo ಒಂದು ಸಾಕ್ಷಿಗಿದೆ) ಗುಂಡುಪೊಂಗಲ(ಪಡ್ಡು)-ಚಟ್ನಿಯ ಡಬ್ಬಿಯನ್ನು ಅಮ್ಮನ ಜಂಬದ ಚೀಲದಲ್ಲಿ ತುಂಬಿಕೊಂಡು, ಬನಶಂಕರಿ ಜಾತ್ರೆಯಲ್ಲಿ ಹಠ ಮಾಡಿ ಕೊಡಿಸಿಕೊಂಡಿದ್ದ ಬಣ್ಣದ  ಛತ್ರಿಯನ್ನೂ ಹಿಡಿದು ಚಿಲಿಪಿಲಿಗುಟ್ಟುವ ಮಕ್ಕಳ ಜೊತೆಗೆ ಶಾಲೆಗೆ ಹೊರಟಿದ್ದೆ. ಮತ್ತೊಂದು ತಾಸಿನಲ್ಲಿ ನಮ್ಮ ಮನೆಗಳ ಮುಂದೆಯೇ ನಮ್ಮ ಪ್ರವಾಸದ ಮೆರವಣಿಗೆ ಸಾಗಿತ್ತು !! 

ಆ ಪ್ರವಾಸದ ಚೆಂದ ನೋಡಲು ಮನೆಯ ಬಾಗಿಲ ಬಳಿ ನಿಂತಿದ್ದ ಅಮ್ಮನತ್ತ ಓಡಿ ಹೋಗಿ "ಅಮ್ಮಾ, ಪ್ರವಾಸ ಇಲ್ಲೇ ಹತ್ರನೆಯ, ನಂಗ್ ಈ ಛತ್ರಿ ಉಪ್ಯೋಗಿಲ್ಲೆ." ಎಂದು ಅದನ್ನು ಕೊಟ್ಟು ಮತ್ತೆ ಸಾಲನ್ನು ಸೇರಿದ್ದೆ. ಎಲ್ಲ teacher ಗಳಿಗೆ ಹಾಗೂ ಮಕ್ಕಳಿಗೆ ನಮ್ಮನೆ ಇದೇ ಎಂದು ತೋರಿಸುವ ಇರಾದೆಯೂ ನನ್ನದಾಗಿತ್ತೇನೋ. 

ನಮ್ಮ ಪ್ರವಾಸದ ಗಮ್ಯವಿದ್ದುದು ನಾವು ಹಿಂದಿನ ದಿನ ಪ್ರವಾಸಕ್ಕೆಂದು ತಯಾರಿ ನಡೆಸಿದ್ದ  ಅದೇ ಗಣಪತಿ ದೇವಸ್ಥಾನದಲ್ಲಿ !! ನಮ್ಮ ಮನೆಯಿಂದ ಕೂಗಳತೆಯ ದೂರ ಅದು. ಆವತ್ತು ನಮ್ಮ ದೇವರಿಗೆ ಅಲ್ಲಿ ವಿಶೇಷ ಪೂಜೆ, ತೀರ್ಥ-ಪ್ರಸಾದ ಹಂಚಿಕೆ.. ನಮಗೋ ಅಂದು ಎಲ್ಲಿಲ್ಲದ ಭಕ್ತಿ.. ದೇವಸ್ಥಾನದ ಪುಜಾರಿ ನಮ್ಮದೇ ನೆಂಟನೇನೋ ಎನ್ನುವ ಭಾವ. ಶಾಲೆಯ ಮಕ್ಕಳು ಹುಂಡಿಗೆ ಕಾಣಿಕೆ ಹಾಕುವುದನ್ನು ಕಂಡು ಕಾಲನಿಯ ಮಕ್ಕಳು ಕಂಗಾಲು! ನಿನ್ನೆಯ ಮೀಟಿಂಗಿನಲ್ಲಿ ಈ ವಿಷಯವೇ ಬಂದಿರಲಿಲ್ಲವಲ್ಲ! ದಿನವೂ ಕಾಣುವ ದೇವರಿಗೆ ನಾವೂ ಕಾಣಿಕೆ ಹಾಕಬೇಕೆಂದು ನಮಗ್ಯಾರಿಗೂ ಹೊಳೆದಿರಲೇ ಇಲ್ಲ. ಇದರಲ್ಲೂ ನಾವು ಕಡಿಮೆಯಿಲ್ಲವೆಂದು ತೋರಿಸಲು ಎಲ್ಲರೂ ಮನೆಗೆ ಓಡಿ ಕಾಣಿಕೆಯ ಜೊತೆಯಲ್ಲಿ ಪೂಜಾರಿಗೆ ದಕ್ಷಿಣೆಯನ್ನೂ ತಂದು ದೇವರಿಗೆ ಪ್ರದಕ್ಷಿಣೆ ಹಾಕಿದ್ದೆವು. 

ಅಲ್ಲಿಂದ ನಮ್ಮ ಪ್ರಯಾಣ ಸಾಗಿದ್ದುದು ನಾವು ದಿನವೂ ಆಡಿಕೊಂಡು ಬರುತ್ತಿದ್ದ ಐ.ಬಿ.ಗೆ.. ಅಲ್ಲಿಯೇ ಲಾನ್ ನಲ್ಲಿ ಕೆರೆ-ದಂಡೆ, ಕುಂಟೆ-ಬಿಲ್ಲೆ, ಅಂತಾಕ್ಷರಿಯ ಗೌಜು. ಸಮೀಪದ ಶರತ್ ಮನೆಯಿಂದಲೇ ದೊಡ್ಡದೊಂದು ball ತರಿಸಿ ಆಡಿಸಿದ್ದರು ಎಂದು ಅಮ್ಮಾ ತನ್ನ ನೆನಪಿನ ಡಬ್ಬಿಯ ಮುಚ್ಚಳ ತೆಗೆಯುತ್ತಾಳೆ. ನಂತರ ತಿಂಡಿ ತಿನ್ನುವ ವೈಭವ. ಪ್ರದರ್ಶನದ ಜೊತೆ exchange ಆಫರ್ ಗಳ ಭರಾಟೆ. ಮನೆಯಲ್ಲಿ ಬೆಳಗಿನ ತಿಂಡಿ ತಿನ್ನಲು ತಿಣುಕಾಡುವ ನಾನು (ಈಗಲೂ!) ಎಲ್ಲರೊಂದಿಗೆ ಡಬ್ಬಿ ಖಾಲಿ ಮಾಡಿದ್ದೆ! ಆಡಿದ್ದೂ ಆಯಿತು, ತಿಂದಿದ್ದೂ ಆಯಿತು. ಇಲ್ಲಿಗೆ ನಮ್ಮ ಪ್ರವಾಸದ ಕೊನೆಯ ಹಂತವೂ ಮುಗಿದಿತ್ತು. 

ಎಲ್ಲರೂ ಮತ್ತೆ ಸಾಲಿನಲ್ಲಿ ಮರಳಿ ಶಾಲೆಗೆ ಹೋಗುವಾಗ, ನಾವು ಮಾತ್ರ ಮಾರು ದೂರದಲ್ಲಿಯೇ ಸಿಕ್ಕ ನಮ್ಮ ನಮ್ಮ ಮನೆಗಳನ್ನು ಹೊಕ್ಕಿದ್ದೆವು. ಎಲ್ಲರಿಗೂ ನಮ್ಮ ಕಾಲನಿಯನ್ನು ಇಂಚಿಂಚೂ ಬಿಡದೆ ತೋರಿಸಿದ್ದೇ ನಮ್ಮ ಪ್ರವಾಸದ ಹೆಚ್ಚುಗಾರಿಕೆಯಾಗಿತ್ತು.  ಹೀಗೆ, ಎರಡು ದಿನಗಳಿಂದ ಬೀಗುತ್ತಿದ್ದ ನಮ್ಮ ಪ್ರವಾಸ ಪ್ರಯಾಸವಿಲ್ಲದೆ ನಮ್ಮ ಕಾಲನಿಯಲ್ಲಿಯೇ ಮುಗಿದುಹೋಗಿತ್ತು.. 


ನಮ್ಮ ಆಗಿನ ಆ ಪ್ರವಾಸ, ಅದರ ತಯಾರಿ ಇವೆಲ್ಲವನ್ನೂ ನೋಡಿ ಅಮ್ಮಂದಿರ ಮುಸಿಮುಸಿ ನಗು ಏಕಿತ್ತು ಎಂಬುದು ಈಗ ಅರ್ಥವಾಗುತ್ತಿದೆ.... ಆದರೆ... ಆಗ, ಆ ಉತ್ಸಾಹ, ಸುಖದ ಅನುಭೂತಿಗಳು ಅವನ್ನೆಲ್ಲಾ ಮೀರಿ ನಿಂತಿತ್ತು. ಹೀಗಾಗಿ ಪ್ರಯಾಸವಿಲ್ಲದೇ ಕಂಡ ಆಗಿನ ನನ್ನ ಆ ಪ್ರವಾಸವೇ ನನ್ನಲ್ಲಿ ಅಜರಾಮರ. ಈಗ ನನ್ನ ಮೊದಲ ಕಾಲೇಜಿನ ಕೊನೆಯ ಕಂತು.  ಅಲ್ಲಿಂದ ಇಷ್ಟು ದೀರ್ಘದ ಅವಧಿಯವರೆಗೂ ಮತ್ತೆ ನೆನಪಿನಲ್ಲುಳಿಯುವ ಮತ್ತೊಂದು ಪ್ರವಾಸದ ಮೆರವಣಿಗೆಯನ್ನು ನಾನು ಕಾಣಲೇ ಇಲ್ಲ. ಅಂತಹ ಅವಕಾಶವೇ ಸಿಕ್ಕಿರಲಿಲ್ಲ. 

ಅದಕ್ಕಾಗಿ ಮತ್ತೆ... ಈಗ, ಕಾಲೇಜಿನ ಕೊನೆಯ ದಿನಗಳಲ್ಲಿ ಮುಚ್ಚಿಕೊಳ್ಳುತ್ತಿರುವ ಎಲ್ಲ ಸಾಧ್ಯತೆಯನ್ನು ನಾವೇ ತೆರೆದುಕೊಂಡ ಪ್ರಯಾಣ.. ಯಾಣ, ಅಪ್ಸರಕೊಂಡ..