Tuesday, June 8, 2010

ಈ ಭೇದ ಭಾವಗಳಿಗೆ ಕೊನೆಯೇ ಇಲ್ಲವೆ??

ರಾತ್ರಿ.... ಮಲಗಿದ್ದೆ.... ಮೊನ್ನೆ ನಡೆದ ಭೀಕರ ವಿಮಾನಾಪಘಾತದ ಗುಂಗಿನಲ್ಲಿ.... ಎಲ್ಲೋ ದೂರದಲ್ಲಿ ಯಾರು ಯಾರದ್ದೋ ಧ್ವನಿ ಕೇಳಿಬರುತ್ತಿತ್ತು. ಪ್ರೇತಾತ್ಮಗಳು! ಭಯವಾಯಿತು. ಎರಡು ಪ್ರೇತಗಳ ನಡುವೆ ಚರ್ಚೆ ನಡೆದಂತಿತ್ತು.


"ನೋಡ್, ಆಕಡಿಗ್ ಕುಂತಾರಲ್ಲ, ಅವ್ರೆಲ್ಲಾ ಮೊನ್ನಿ ಆದ ವಿಮಾನ್ ಅಪಘಾತ್ದಾಗ್ ಸತ್ತವ್ರು. ಅವ್ರಿಗ್ ನಮ್ ಹಾಂಗ ಬಿಟ್ ಬಂದ್ ಸಂಸಾರದ್ ಹೊಟ್ಟಿ ಚಿಂತಿ ಇಲ್ ಬಿಡ. ರಾಜ್ಯ ಸರ್ಕಾರಾ, ಕೇಂದ್ರ್ ಸರ್ಕಾರಾ ಯೆರ್ಡೆರ್ಡ ಲಕ್ಷಾ ಪರಿಹಾರ್ ಕೊಡ್ತದಂತ ಅವ್ರಿಗೆ. ವಿಮಾ ಸಂಸ್ಥಿ, ವಿಮಾನ ಸಂಸ್ಥಿ ಎಲ್ಲಾ ಸೇರಿ ಅಜಮಾಸ್ ಒಂದೊಂದ್ ಕೋಟಿನ ಅಕ್ಕೈತೇನ!"

"ಹಂಗಾರ್ ನಮ್ ಸಂಸಾರಕ್ಕೂ ಅಷ್ಟ ಪರಿಹಾರ್ ಸಿಗ್ತದೇನ?"

"ನಮ್ಮವ್ರಿಗೇನ ಸಿಗ್ತದ ಮಣ್ಣ! ನಾವೇನ್ ವಿಮಾನದಾಗ್ ಸತ್ತೀವೇನ? ರಾಜ್ ಮರ್ಯಾದಿ ಸಿಗಾಕ! ಚಿತ್ರದುರ್ಗದ್ ಚಳ್ಳಕೆರಿ ಸಮೀಪ್ ಸಾದಾ ಬಸ್ ಅಪಘಾತದಾಗ್ ಸುಟ್ಕೊಂಡ್ ಸತ್ ಮೂವತ್ ಮಂದಿ ನಾವ್. ಬಸ್ನಾಗಿದ್ ಬಾಕಿ ೨೪ ಮಂದಿ ಗತಿ ಅದೇನಾತ ಯೇನ."

"ನಾವ್ ಸತ್ತಾಗ ನಮ್ನ್ ನೋಡಾಕೂ ಮಂತ್ರಿಗ್ಳ ಯಾರಾರ ಬಂದಿದ್ರೇನ? ಅವ್ರ್ ಜೀವಕ್ಕಾರ ಚಿನ್ನದ್ ಬೆಲಿ, ನಮ್ ಹೆಣಕ್ ಕೌಡಿ ಕಿಮ್ಮತ್ತಿಲ್ಲಾ. ಬಡವ್ರಿಗೆ ಬದ್ಕಿದ್ದಾಗ... ಇಲ್ದಿದ್ ಬೆಲಿ ಸತ್ ಮ್ಯಾಗ್ ಎಲ್ಲಿಂದ್ ಬರ್ತೈತ್ ಬಿಡ. ಸತ್ತ ಜೀವಕ್ಕೂ ಯದಕ್ ಈ ಭೇದ ಭಾವ ಮಾಡ್ತಾರ ಅಂತೀನಿ? ನಾವೇನ್ ತಪ್ ಮಾಡೀವಿ?"

"ಖರೆ ಹೇಳ್ದಿ ನೀ. ಆದ್ರ ಅವ್ರಿಗ ಕೋಟಿಗಟ್ಲೆ ಕೊಡೋರು ವಿಮ ಸಂಸ್ಥಿಯವ್ರು. ನಮ್ ಬಸ್ಸಿಗ್ ಯೆಲ್ಲಿರ್ತೈತಿ ಅಷ್ಟ ವಿಮಾ? ಆಕಡಿಗ್ ಇನ್ನೊಂದ್ ಗುಂಪೈತ್ ನೋಡ್. ಮೇ ೧೫ಕ್ ಭೋಪಾಲ್ ಬಸ್ ಅಪಘಾತದಾಗ್ ಕರ್ರೆಂಟ್ ತಾಗಿ ಸತ್ರಲ್ಲಾ ೨೮ ಮಂದಿ, ಅವ್ರ ಅವ್ರು. ಅವ್ರೆಲ್ರೂ ಬುಡಕಟ್ ಜನಾಂಗ್ದವ್ರಂತ್."

"ಅವ್ರಿಗೂ ಪರಿಹಾರ್ ಸಿಗ್ತೈತೋ ಇಲ್ಲೋ, ನಮ್ ಹಾಂಗ... ಪಾಪ್ ನೋಡ್."

"ನಮ್ಮವ್ರಿಗ ಹತ್ತಿಪ್ಪತ್ ಸಾವ್ರಾ ಕೊಟ್ ಹಾಂಗ್ ಮಾಡಿ ಕೈ ತೊಳ್ಕೊಂಡ್ ಬಿಡ್ತದೋ ಏನ್ ಈ ಸರ್ಕಾರ. ರಾಜ್ಯ ಸರ್ಕಾರಾ, ನಾವ್ ಸತ್ತಿದ್ದಕ್ಕೂ
ಯೆರ್ಡೆರ್ಡ ಲಕ್ಷಾ ಪರಿಹಾರ್ ಕೊಟ್ಟಿದ್ರ ಮನಿಯವ್ರಿಗಾದ್ರೂ ಎರ್ಡ್ ಹೊತ್ತಿನ ಊಟ ಆಕ್ಕಿತ್ತ್ ಸಲ್ಪ್ ದಿನಾ. ಹೋಗ್ಲಿ ಅಂದ್ರ ಅವ್ರಿಗ್ ಕೊಟ್ ಹಾಂಗ ದೊಡ್ ಮನ್ಶಾರ್ ಯಾರಾರ ಒಬ್ರ್ ದೊಡ್ ಮನ್ಸ್ ಮಾಡಿ ನಮ್ ಸಂಸಾರಕ್ಕೂ ಒಂದೊಂದ್ ಕೆಲಸ ಕೊಡ್ಶಿದ್ರ ನಮ್ಮನಿಯಾಗ ಬದ್ಕಿದ್ದವ್ರಿಗ್ ವಂದ್ ದಾರಿ ಆರ ಆಕ್ಕಿತ್ತ್. ಏನಂತಿ?"


"ಹವ್ದ್ ಮತ್ತ! ಅಂದಂಗ, ಅವರ್ ಸುದ್ದಿ ತಿಂಗ್ಳಗಟ್ಲೆ ಪಪೆರ್ನಾಗ್ ಬರ್ತೈತಲ್ಲ, ಹಾಂಗ ನಮ್ ಸುದ್ದಿನೂ ನಾಕ ದಿನಾನಾರ ಬರ್ತೈತ್ ಹವ್ದಿಲ್ಲೋ?"


"ಅಜ್ಜಿಗ್ ಅರವಿ ಚಿಂತಿ ಅಂದ್ರ ಮೊಮ್ಮಗಂಗ್ ಕಜ್ಜಾಯದ್ ಚಿಂತಿ ಅಂದಂಗಾತು ನಿನ್ ಕತಿ! ನಾ ಮನಿ, ಮಕ್ಳ, ಸಂಸಾರ ಅಂತ ತೆಲಿ ಕೆಡ್ಸಕೊಂಡ್ ಕುಂತ್ರ ಇವಂಗ್ ಪಪೆರ್ನಾಗ್ ತನ್ ಹೆಸ್ರ್ ಬರ್ತೈತೋ ಇಲ್ಲೋ ಅನ್ನು ಚಿಂತಿ! ಹುಚ್ಚ್ ಖೋಡಿ ಅಡಿ ನೋಡ್ ನೀ."


"ಯೇ ನೋಡ್ಲಾ, ಮತ್ಯಾವನೋ ಬರಾಕತ್ತಾನ! ಇವಾ ಯಾವ್ ಅಪಘಾತದೊಳ್ಗ್ ಜೀವಾ ಕಳ್ಕೊಂಡಾನ ಯೇನ."


"ವಿಚಾರ್ಸೂಣ್ ತಡಿ... ಲೇ... ಇಲ್ ಬಾರಲೇ...!" ಎಂದು ಪ್ರೇತ ಕೂಗಿದಾಗ ನನಗೆ ಒಮ್ಮೆಲೇ ಎಚ್ಚರವಾಯಿತು (ನಿದ್ದೆಯಿಂದ)! ಕನಸುಗಳು ಕರಗಿದ್ದವು. ವಾಸ್ತವ ಕಣ್ಣ ಮುಂದಿತ್ತು. ಪ್ರೇತಗಳ ಮಾತುಗಳು ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು. ನಿಜ. ದಿನನಿತ್ಯ ಅಪಘಾತಕ್ಕೆ ಸಿಲುಕುವ ಬಡಪಾಯಿಗಳ ಜೀವಕ್ಕೆ ಬೆಲೆ ಇಲ್ಲ ಇಲ್ಲಿ. ಇವರ ಕುಟುಂಬದವರು ಅಪಘಾತದ ಪರಿಹಾರಕ್ಕಾಗಿ ಕಾನೂನಿನ ಮೊರೆ ಹೊಕ್ಕು ಹೋರಡುವಷ್ಟು ಶಕ್ತರೂ ಅಲ್ಲ.


ಅಪಘಾತ ವಲಯ ಎಂದೇ ಹೆಸರಾಗಿರುವ ಆನೆಗುಂಡಿ, ಬೈಂದೂರ, ಚಾರ್ಮುಡಿ ಘಾಟಿನಂತ ಪ್ರದೇಶಗಳು 'ಮರಣ ಮೃದಂಗ' ಬಾರಿಸುತ್ತಲೇ ಇವೆ. ಇಲ್ಲಿನ ಇಳಿಜಾರಿನ ರಸ್ತೆಯ ತಿರುವುಗಳು ಬಹಳ ಅಪಾಯಕಾರಿಯಾಗಿವೆ. ರಸ್ತೆಯ ಸೂಚನಾ ಫಲಕಗಳೂ ತುಂಬಾ ಕಿರಿದು. ಇಂಥಲ್ಲಿ ಗುಡ್ಡವನ್ನು ಇನ್ನಷ್ಟು ಕಡಿದು ರಸ್ತೆ ಅಗಲಗೊಲಿಸಿಯೋ ಅಥವಾ ರಸ್ತೆಯನ್ನು ಸ್ವಲ್ಪವಾದರೂ ನೇರಗೊಳಿಸಿದ್ದಲ್ಲಿ, ಅಲ್ಲಿನ ಅಪಘಾತಗಳನ್ನು ಸಾಧ್ಯವಾದಷ್ಟರ ಮಟ್ಟಿಗೆ ತಪ್ಪಿಸಬಹುದಿತ್ತೇನೋ.


ವಿಮಾನಾಪಘಾತಗಳನ್ನು ಕಡಿಮೆಗೊಳಿಸಲು ಹೇಗೆ ಪ್ರಯತ್ನ ನಡೆಯುತ್ತಿದೆಯೋ, ಹಾಗೆಯೇ ಇಲ್ಲಿಯೂ ಪ್ರಯತ್ನ ನಡೆಯುತ್ತಲೇ ಇದ್ದರೂ ಫಲದಾಯಕವಾಗುತ್ತಿಲ್ಲ. ಕಾರಣ ಅತಿವೇಗದ, ಅಜಾಗರೂಕತೆಯ ಚಾಲನೆ, ಬೆಳಗಿನ ಜಾವದಲ್ಲಿನ ವಾಹನ ಚಾಲನೆಯ ಜೊತೆಗೆ ಕುಡಿದು ವಾಹನ ಚಲಾಯಿಸುವುದೂ ಅಪಘಾತಗಳಿಗೆ ಪ್ರೇರಣೆಯಾಗಿವೆ. ಅಂದಲ್ಲಿ, ಅಪಘಾತಗಳನ್ನು ತಪ್ಪಿಸುವಲ್ಲಿ ಕೇವಲ ಸರ್ಕಾರ ಒಳ್ಳೆಯ ರಸ್ತೆ, ಬೇಕಾದ ಅನುಕೂಲತೆಗನ್ನು ಒದಗಿಸಿದರೆ ಸಾಲದು, ನಮ್ಮ ಹೊಣೆಯೂ ಇದರಲ್ಲಿ ಮಹತ್ವದ್ದಾಗಿದೆ. ಅಂತೆಯೇ ತಮ್ಮ ತಪ್ಪಿಲ್ಲದೆಯೂ ಇಂತಹ ದುರಂತಗಳಿಗೆ ಸಿಲುಕುವ ಪ್ರಯಾಣಿಕರಿಗೆ ಸಮಾನವಾದ ಪರಿಹಾರ ನೀಡುವುದೂ ಸರ್ಕಾರದ ಕರ್ತವ್ಯವಾಗಿದೆ. ಇಂತಹ ದುರಂತಗಳಿಗೆ ಬಲಿಯಾದ ಬಡವರಿಗೆ ನ್ಯಾಯ ಒದಗಿಸುವಲ್ಲಿ ನಾವೂ ಕೂಡ ಧ್ವನಿಯಾಗೋಣ.
________________________________________________________
       was published in udayavani on 13/06/2010



Friday, June 4, 2010

ಇದೆಂಥ ಮನೋದೌರ್ಬಲ್ಯ?

ಒಂದು ವಾರದ ಹಿಂದೆ ಅಮ್ಮನ ಜೊತೆ ಧಾರವಾಡದಿಂದ ರಾತ್ರಿ ೯ ಗಂಟೆಗೆ ಖಾಸಗಿ ಬಸ್ಸಿನಲ್ಲಿ ನನ್ನ ಪ್ರಯಾಣ ಸಾಗಿತ್ತು. ಹುಬ್ಬಳ್ಳಿಯಲ್ಲಿ ಅರ್ಧ ಗಂಟೆ ಬಸ್ ನಿಲ್ಲಿಸಿದ್ದರು. ಬಸ್ ನಿಲ್ದಾಣದ ಎದುರು, ಸಾಲು ಹಿಡಿದು ಸಾರಾಯಿ ಅಂಗಡಿಗಳು. ನನಗೇಕೋ ಬಸ್ ನಿಲ್ಲಿಸಿದ ಜಾಗ ಸರಿ ಅನ್ನಿಸಲಿಲ್ಲ, ಮುಜುಗರ ತರಿಸುತ್ತಿತ್ತು. ಅಲ್ಲಿ ನನ್ನ ಕಣ್ಣಿಗೆ ಬಿದ್ದ ಒಂದು ಸನ್ನಿವೇಶ ಮನಸ್ಸನ್ನು ಘಾಸಿಗೊಳಿಸಿತು.

ಸಾರಾಯಿ ಅಂಗಡಿಗಳಲ್ಲಿ ಒಳ ಹೋಗುವವರು ಹೊರಬರುವವರಲ್ಲಿ ಹದಿಹರೆಯದವರ ಸಂಖ್ಯೆಯೇ ಹೆಚ್ಚಿತ್ತು. ನಮ್ಮಬಸ್ ಹೊರಡಲು ಇನ್ನು ಕೆಲವೆ ಕ್ಷಣಗಳು ಬಾಕಿ ಉಳಿದಿದ್ದವು. ಅಷ್ಟು ಹೊತ್ತಿಗೆ ನಮ್ಮ  ಬಸ್ಸಿನವನೆ ಆದ ಒಬ್ಬ ಪ್ರಯಾಣಿಕ ಬಸ್ ನಿಂದ ಇಳಿದು ಆ ಅಂಗಡಿಯತ್ತ ನಡೆದ. ಹಿಂದಿನಿಂದ ಅವನ ಸಂಬಂಧಿ ಅವನನ್ನು ಕೂಗಿ ಕೂಗಿ ಕರೆದಳು. 'ಹೋಗ್ಬೇಡೋ ತಮ್ಮಾ, ಬಸ್ ಬಿಡ್ತೈತಿ' ಎಂದು. ಆದರೆ ಆ ಮನುಷ್ಯ ಅವಳ ಕೂಗನ್ನು ಕಿವಿಗೆ ಹಾಕಿಕೊಳ್ಳದೆ ಹೊಗಿಯೇಬಿಟ್ಟ.

ಕೆಲ ಕ್ಷಣಗಳಲ್ಲಿ ಬಸ್ ಕಂಡಕ್ಟರ್ 'ಎಲ್ಲಾರೂ ಅದೀರಲ್ಲಾ, ಎರಡ್ ನಿಮ್ಷದೊಳ್ಗ್ ಬಸ್ ಬಿಡ್ತೀವಿ' ಎಂದ. ತಕ್ಷಣ ಬಸ್ಸಿನಲ್ಲಿದ್ದ ಆತನ ಸಂಬಂಧಿ ಕೆಳಗಿಳಿದು ಅವನ ಹಿಂದೆಯೇ ಓಡಿದಳು. ಅವನನ್ನು ಕರೆಯಬೇಕಲ್ಲ... ಒಬ್ಬ ಸುಸಂಸ್ಕೃತ ಹೆಣ್ಣಾಗಿ ಆ
ಸಾರಾಯಿ ಅಂಗಡಿಯೊಳಗೆ ಹೋಗಲು ಹೇಗೆ ಸಾಧ್ಯ? ಹೊರಗಿನಿಂದಲೇ 'ಲೋ ತಮ್ಮಾ...' ಎಂದು ಕೂಗಿದಳು. ಉತ್ತರ ಬರಲಿಲ್ಲ. 'ಮಹಾಂತೇಶಾ...' ಎಂದು ಮತ್ತೆ ಮತ್ತೆ ಕೂಗಿದಳು. ಕೇಳಬೇಕಲ್ಲ ಆ ಮಹಾಪುರುಷನಿಗೆ. ಅಷ್ಟು ಸಾಲದೆಂದು ಆ ಅಂಗಡಿಯಲ್ಲಿದ್ದ ಆ ಜನ (ಕುಡುಕರು) ಅವಳಿಗೆ ಸಹಾಯ ಮಾಡುವುದನ್ನು ಬಿಟ್ಟು ಅವಳ ಆ ಸ್ಥಿತಿಯನ್ನು ನೋಡಿ ನಗಲಾರಂಭಿಸಿದರು! ಅಷ್ಟರಲ್ಲಿ ಬಸ್ ಕಂಡಕ್ಟರ್ ಆ ಹೆಂಗಸನ್ನು ಬೊಟ್ಟು ಮಾಡಿ 'ನೀವ್ ಬರ್ತಿರೋ ಏನ್ ಬಸ್ ಬಿಡ್ಲೋ' ಎಂದು ಕೇಳಿದ್ದಕ್ಕೆ ಆಕೆ ಬೇರೆ ದಾರಿ ಕಾಣದೆ ಸುಮ್ಮನೆ ಬಸ್ ಹತ್ತಿದಳು. ಪ್ರಯಾಣ ಸಾಗಿತು. ಅದುವರೆಗೂ ಬಸ್ಸಿನ ಕಿಟಕಿಯಿಂದ ಅಸಹಾಯಕಳಾಗಿ ಇವನ್ನೆಲ್ಲ ನೋಡುತ್ತಿದ್ದ ಅವನ ಹೆಂಡತಿಯ ಮನದ ಬೇಗುದಿ ಬಿಕ್ಕಳಿಕೆಯಾಗಿ ಬದಲಾಗಿತ್ತು.
















ಅವಳ ಕಣ್ಣೀರನ್ನು ಒರೆಸುವವನೇ ಅವಳ ಆ ಕಣ್ಣೀರಿಗೆ ಕಾರಣನಾದಾಗ? ಬಸ್ ಸೀಟ್ ರಿಸರ್ವ್ ಮಾಡಿಸಿದ್ದನ್ನೂತಪ್ಪಿಸಿಕೊಳ್ಳುವಷ್ಟರ ಮಟ್ಟಿಗೆ ಮೀರಿ ನಿಂತಿತ್ತು ಅವನಲ್ಲಿ ಚಟ. ದುಶ್ಚಟ ಒಬ್ಬ ವ್ಯಕ್ತಿಯನ್ನು ಎಷ್ಟರ ಮಟ್ಟಿಗೆ ಕೆಳಗಿಳಿಸಬಹುದು? ತಮ್ಮಮನೋದೌರ್ಬಲ್ಯದಿಂದ ಸುತ್ತಲಿನ ಸಂಬಂಧಿಗಳ ಕನಸುಗಳು ಕರಗಿ ಹೋಗುತ್ತಿರುವುದೂ ಅವರರಿವಿಗೆ ಬಾರದು, ಅಂತಹ ಸ್ವಾರ್ಥಿಗಳು.

ನಮ್ಮ ಸಂಸ್ಕೃತಿಯ ತೇರನ್ನೆಳೆವ ಈ ಸಮಾಜವೇ ಎಷ್ಟೊಂದು ರೋಗಪೀಡಿತ! ಮನಸ್ಸಿನ ದೌರ್ಬಲ್ಯ ಸದೃಢವಾದ ಸಮಾಜವನ್ನು ಹಂತ ಹಂತವಾಗಿ ಸಮಾಧಿಗೊಳಿಸುತ್ತಿದೆ ಎನ್ನಿಸಿತು. ಎಷ್ಟೋ ಅಸಾಮಾನ್ಯ ಪ್ರತಿಭೆಗಳು ಇಂತಹ ಕೀಳು ಮನೋಪ್ರವ್ರತ್ತಿಯಿಂದ ವ್ಯರ್ಥ ಪೋಲಾಗುತ್ತಿವೆ. ನಿಜವಾದ ಬಡತನವೆಂದರೆ ಇದೆ ಏನೋ!

_________________________________________________
                     was published in vijaya karntaka on 27/05/2010