Tuesday, August 24, 2010

ಬಾಲ್ಯದ ಕನಸುಗಳು ಕರಗುವ ಮುನ್ನ.......

                                ಇಲ್ಲೊಂದು ಚೆಂದದ ಆಂಟಿ. ಅವರ ಪುಟ್ಟ ಮಗಳೂ ಅವರ ಹಾಗೆಯೇ ತುಂಬಾ ಚೆಂದ. ಆದರೆ ಆ ಆಂಟಿಯ ಮನೆಯ ಪರಿಸರ, ಅವರಷ್ಟು ಚಂದವಾಗಿಲ್ಲ. ದಿನ ಬೆಳಗಾದರೆ ಅವರ ಪುಟ್ಟ ಮಗಳಿಗೆ ಬೈಗುಳದ ಸುಪ್ರಭಾತ. "ನಿನ್ನಾ..... ಹೊಡಿತೆ, ವದೀತೆ, ಚಚ್ತೆ, ಗುದ್ ಹಾಕ್ಬಿಡ್ತೆ ಕಾಣ್......! ಬೆತ್ತ ತರ್ಲಾ? ಬೆಲ್ಟ್ ತರ್ಲಾ? " ರಾತ್ರಿ ಮಲಗುವವರೆಗೂ ಇದೇ ಮಂತ್ರಾಕ್ಷತೆ. ಹಾಂ, ಆ ಆಂಟಿಗೆ ಪ್ರೀತಿ ಮಾಡಲು ಬರುವುದೇ ಇಲ್ಲ ಎಂದೇನಿಲ್ಲ! ಅವರ ಮನೆಯ ನಾಯಿ, ಪಕ್ಕದ ಮನೆಯ ಬೆಕ್ಕುಗಳಿಗೆಲ್ಲ (ಸುತ್ತಲಿರುವವರಿಗೆಲ್ಲ ಕಾಣುವ ಹಾಗೆ) ಪ್ರೀತಿಯ ಸಮಾರಾಧನೆ ಜೋರಾಗಿಯೇ ನಡೆದಿರುತ್ತದೆ.


                                ಮಗುವಿಗೆ ಚೆಂದದ ಅಂಗಿ, ಲಂಗ ಹಾಕಿದರೆ ಸಾಕೆ? kurkure, lays, kitkat, gud day (ಮಗುವಿಗೆ ಬಿಸ್ಕೆಟ್ನಲ್ಲಿ ಮಾತ್ರ ಗುಡ್ ಡೇ!) ಗುಡ್ಡೆ ಹಾಕಿದರೆ ಅಮ್ಮನ ಕರ್ತವ್ಯ ಮುಗಿಯಿತೇ? ಆ ಮಗುವಿನ ಭಾವನಾತ್ಮಕ ಬೇಕು ಬೇಡಗಳ ಕೇಳುವವರಾರು? ಅದರ ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಬೆಳಕಾಗುವವರಾರು?


                                ಆ ಮಗುವೀಗ ಪಾಲಕರಿಗೇ ತಿರುಗಿ ಬಿದ್ದಿದೆ. ಓದು ಬರೆಯುವ ವಿಷಯದಲ್ಲಿ ಅದು ಯಾರ ಮಾತನ್ನೂ ಕೇಳುತ್ತಿಲ್ಲ. Home work ಮಾಡಿಸುವಲ್ಲಿ ಅಮ್ಮನದ್ದು ಮಗಳದ್ದು ಜಟಾಪಟಿಯೇ ನಡೆದಿರುತ್ತದೆ. ಮಗಳೂ ಸೋಲುತ್ತಿಲ್ಲ. ಆದರೆ ಅವಳ ಭವಿಷ್ಯದ ಸೋಲಿಗೆ ಇದೇ ಪ್ರಾರಂಭ ಎಂದು ಅವರಿಗೆ ತಿಳಿದಂತಿಲ್ಲ. "ಅವ್ಳ್ class teacher, ನಮ್ಗೆ ಅವ್ಳನ್ ನೋಡ್ಕಂಬ್ಕೆ ಓದ್ಸುಕೆ ಆತಿಲ್ಲ, ಚೊರಿ. ನೀವ್ ಅವ್ಳ್ನಾ ಬೇರೆ school ಗೆ ಸೇರ್ಸುಕಾತ್ತಾ ಕಾಣಿ ಅಂಬ್ರ್, teacher ನನ್ನತ್ರ ಹಾಂಗ್ ಹೇಳುವಾಗ ನಾನ್ ಮರ್ಕಿಬಿಟ್ಟೆ ಗೊತ್ತಿತ್ತಾ. ನನ್ ಕಷ್ಟಾ ಯಾರತ್ರ ಹೇಳ್ಕಂಬ್ದ್ ಮಾರಾಯ್ರೆ?" ಎಂದು ಫೋನಿನಲ್ಲಿ, ಮನೆಗೆ ಬಂದವರಲ್ಲಿ, ಎದುರಿಗೆ ಸಿಕ್ಕವರಲ್ಲಿ ಇದನ್ನೇ ಅಲವತ್ತಿಕೊಳ್ಳುತ್ತಿರುತ್ತಾರೆ.


                                ತನ್ನ ಮಗಳ ರಗಳೆಯನ್ನು ಸಾದೋಹರಣವಾಗಿ ಸಾದರಪಡಿಸುವಾಗಲೊಮ್ಮೆ ನನ್ನಜ್ಜಿ ಅವರಲ್ಲಿ ಹೇಳಿದ್ದರು, "ಅವಳು ಶಾಲೆಯಿಂದ ಮನೆಗೆ ಬರೋದ್ರೊಳಗೆ ನಿಮ್ದೆಲ್ಲಾ ಕೆಲ್ಸನೂ ಮಾಡ್ಕೊಳಿ, ಉಳ್ದಿದ್ರಲ್ಲಿ ಹೆಚ್ಚಿನ್ time ನೀವ್ ಅವ್ಳಿಗೆ ಅಂತಾನೇ ಮೀಸಲಿಡಿ. ಅವ್ಳ್ ಆಟ, ಕೊಂಡಾಟಕ್ಕೂ ಅವ್ಕಾಶ ಕೊಡಿ. ಮಗು ಅಲ್ವಾ! ಅವ್ಳಿಗೆ ಇಷ್ಟಾ ಇದ್ದಿದ್ cartoon ನೋಡ್ಲಿಕ್ಕೆ ಬಿಡಿ! ಹಾಗೇ, ನೀವ್ ಕೆಲಸ ಮಾಡುವ ಹೊತ್ತಿಗೆ ಅವ್ಳಿಗೂ ಚೂರ್-ಪಾರ್ ಕೆಲ್ಸಾ ಕೊಟ್ ನೋಡಿ. ಅವ್ಳ್ ಮಾಡಿದ ಕೆಲ್ಸಕ್ಕೆ ಹೊಗಳಿಕೆಯ ಹೊನ್ನಗರಿ ಏರ್ಸಿ. ಆಗ ನೋಡಿ ನಿಮ್ಮಗ್ಳನ್ನ.......!" ಎಂದು. ೨ನೇ ಕ್ಲಾಸಿನ ಆ ಪುಟ್ಟ ಮಗುವೂ ಅದರಮ್ಮನೊಂದಿಗೆ ಈಗಿನ ಎಲ್ಲಾ ಸೀರಿಯಲ್ ಗಳನ್ನೂ ನೋಡುತ್ತದಂತೆ. ಬಹುಷಃ, ಆ ಮಗು ಬೇಡದ ವಿಷಯಕ್ಕೇ ಬಹು ಬೇಗ ಬೆಳೆಯುತ್ತದೆ ಎಂದು ನನ್ನಮ್ಮ ಹೇಳುತ್ತಿದ್ದರು.


                                ಆಂಟಿಯ ಧ್ವನಿಯೇ ಬಲು ಜೋರು. ಅವರು ಮಾತನಾಡಿದರೆ ಸಾಕು, ಸುತ್ತೇಳು ಮನೆಗಳಿಗೂ ಅನಾಯಾಸವಾಗಿ ಕೇಳಿಸುತ್ತದೆ. ಪಿಸುಗುಟ್ಟಿದರೆ, ಛೇ, ಎರಡೇ ಮನೆಗಳಿಗೆ ಕೇಳಿಸುತ್ತದೆ! ಇನ್ನು ಬೈದರಂತೂ ಬೊಬ್ಬೆಯೋ ಬೊಬ್ಬೆ. ಅವರ ಅಕ್ಕರೆಯೂ ಆವೇಶದಲ್ಲಿಯೇ ಇರುತ್ತದೆ. ಮಗುವನ್ನು ತೀರಾ ಮುದ್ದು ಮಾಡುವಾಗಲೊಮ್ಮೆ ಗುದ್ದೂ ಬಿದ್ದಿರುತ್ತದೆ. ಆ ಗುದ್ದು ಪ್ರೀತಿಯದ್ದೋ, ಸಿಟ್ಟಿನದ್ದೋ ಎಂದು ಪ್ರತ್ಯೇಕಿಸಲಾಗದೆ ಆ ಮಗು ಕೆಲವೊಮ್ಮೆ ಕಕ್ಕಾಬಿಕ್ಕಿ! ಸರಿ ತಪ್ಪುಗಳ ದ್ವಂದ್ವದಿಂದ ಹೊರಬರಲು ಅದು ಒದ್ದಾಡುತ್ತಿದೆ. ಇತ್ತೀಚೆಗೆ ಅದು ಸುಳ್ಳು ಹೇಳಲೂ ಪ್ರಾರಂಭಿಸಿದೆಯಂತೆ. ಕಣ್ಣುಗಳಲ್ಲಿ ಕಲರವಗಳಿಲ್ಲ, ಕನಸುಗಳಿಲ್ಲ. ಭಯದ ಕನವರಿಕೆಯೇ ಎಲ್ಲಾ. ಅದನ್ನು ಅರಿಯುವಷ್ಟು ಸಹೃದಯತೆ, ತಾಳ್ಮೆ ಆ ಮಹಾತಾಯಿಗಿಲ್ಲ. ತನ್ನ ನಾಳಿನ ಕರುಳ ಕುಡಿಗಳಿಗೂ ಈ ನರಳುವಿಕೆಯ ನಾಳೆಗಳನ್ನೇ ಬಳುವಳಿಯಾಗಿ ನೀಡಲು ಆ ಮಗುವೂ ಅಣಿಯಾಗುತ್ತಿದೆಯೆಂದು  ಆ ತಾಯಿಗಿನ್ನೂ ಅರಿವಾಗಿಲ್ಲ. ಮಕ್ಕಳ ವ್ಯಕ್ತಿತ್ವ ರೂಪಿಸುವ ಪಾಲಕರೇ ವ್ಯಕ್ತಿತ್ವ ಹೀನರಾಗಿ ವರ್ತಿಸಿದರೆ...?


                                ಹೊತ್ತು ಗೊತ್ತಿಲ್ಲದೇ ರಾಶಿ ರಾಶಿ ಬಟ್ಟೆಗಳನ್ನು ಗುಡ್ಡೆ ಹಾಕಿ ಒಗೆಯುವ ಈ ಅಮ್ಮನಿಗೆ ಇತ್ತೀಚೆಗೆ ಈ ಮಗಳ ಮತ್ತೆರಡು ಉಚ್ಚೆ ಚಾದರವೂ ಬೋನಸ್ಸಾಗಿ ಲಭಿಸುತ್ತಿದೆ. ಅದಕ್ಕಾಗಿ ವೈದ್ಯರ ಬಳಿ ತಾಕಲಾಟ, ಅಮ್ಮನಿಗೆ ಇದೊಂದು ಪೀಕಲಾಟ. ಈ ದಿನಗಳಲ್ಲಿ ಅಮ್ಮ ಮಗಳು ಇಬ್ಬರೂ ಸೊರಗಿದ್ದಾರೆ. ಅಮ್ಮನ ಬಗ್ಗೆಯೂ ಒಮ್ಮೊಮ್ಮೆ ಪಾಪ ಎನ್ನಿಸುವುದುಂಟು. ಅವರು ತಮ್ಮನ್ನು ತಾವೇ ವಿಮರ್ಶಿಸಿಕೊಳ್ಳುವಂತಿದ್ದಿದ್ದರೆ......! ತನ್ನ ಮಗಳ ಮೊಂಡುತನದ ಸಮಸ್ಯೆಗೆ ಪರಿಹಾರ ತನ್ನಲ್ಲಿಯೂ ಇರಬಹುದೇನೋ ಎಂದು ಈ ಅಮ್ಮ ಒಮ್ಮೆ ಯೋಚಿಸಿದ್ದಿದ್ದರೆ.......! ಎಲ್ಲಾ  ರೆ.... ರೆ.... ವಗೈರೆ.


                                 ಇಂತಹ ಪಾಲಕರು ನಮ್ಮ ನಿಮ್ಮ ನಡುವೆ ಅನೇಕರಿರುತ್ತಾರೆ. ಮಕ್ಕಳ ಸಮೃದ್ಧ ನಾಳೆಗೆ ಮುನ್ನುಡಿ ಬರೆಯಬೇಕಾದ ಪಾಲಕರೇ ಸಮಸ್ಯೆಗಳಿಗೆ ಮೂಲವಾದರೆ? ಮಕ್ಕಳ ಜೊತೆ ಮಕ್ಕಳಾಗಿ, ಅವರ ಭಾವನೆಗಳಿಗೆ ಸ್ಪಂದಿಸಿದಲ್ಲಿ ಇಂತಹ ಸಮಸ್ಯೆಗಳನ್ನು ಕಡಿಮೆಗೊಳಿಸಬಹುದೇನೋ. ಅವರ ಸ್ವಚ್ಚಂದ ಬಾಲ್ಯವನ್ನು ಆಸ್ವಾದಿಸಲು ಬಿಡಿ. ಪಾಲಕರ ಮಹಾತ್ವಾಕಾಂಕ್ಷೆಯ ಒತ್ತಡಕ್ಕೆ ಮಕ್ಕಳ ಕನಸುಗಳು ಕರಗುವ ಮುನ್ನ...........
                      ಪಾಲಕರೇ, ಒಮ್ಮೆ ತಿರುಗಿ ನೋಡಿ.

5 comments:

  1. 1st of all congrats on decorating ur blog with such wonderful colors..
    And thanks for giving such wonderful blog topics and in-site on few heart touching issues..

    Keep the good work going.. :)

    ReplyDelete
  2. ಶ್ರುತಿ....ನಿಮ್ಮ ಬರವಣಿಗೆ ಮೊದಲೇ ಚಂದ....ನಿಮ್ಮ ಯೋಚನೆಗಳು,ಸುತ್ತಲಿನ ಜಗತ್ತಿನ ಕುರಿತಾದ ನಿಮ್ಮ ಕಾಳಜಿ ನಿಜಕ್ಕೂ ಸೂಪರ್....

    ತಾಜ್ ...

    ReplyDelete
  3. ದಿನನಿತ್ಯ ಕಣ್ಣೆದುರು ನಡೆಯುವ ಕಿರಿಕಿರಿಗಳನ್ನು ನೋಡಿಯೂ ಸುಮ್ಮನಿರಲಾಗದೆ ಕೈಲಾಗದವ ಮೈ ಪರಚಿಕೊಂಡ ಎಂಬಂತೆ ನನ್ನೀ ಬರಹಗಳು :P
    thank you Praveen nd Taj :)

    ReplyDelete
  4. ಶೃತಿ ಕೆಲವೊಂದು ಸಲ ಪ್ರಪಂಚದ ಆಗು ಹೋಗುಗಳ ಬಗ್ಗೆ ತುಂಬ ತಲೆ ಕೆಡುಸ್ಕೊಬಾರದು...

    ಎಲ್ಲದನ್ನು ತಿದ್ದೋಕೆ ಆಗೋದಿಲ್ಲ, ಎಲ್ಲಾದಕ್ಕೂ ಅದರದೇ ಆದ ವ್ಯವಸ್ತೆ ಇರುತ್ತೆ...

    ನಾವು ಹೇಗೆ ಇರಬೇಕು ಗೊತ್ತ...ಈ ಕೆಳಗಿನ ಕಗ್ಗದ ಹಾಗೆ..


    ಓಲೆ ಕಾರನಿಗೇಕೆ ಬರೆದ ಸುದ್ದಿಯ ಚಿಂತೆ???

    ಓಲೆಗಳನವರವರಿಗೈದಿಸಿರೆ ಸಾಕು ||

    ಸಾಲಗಳೋ, ಶೂಲಗಳೋ,ನೋವುಗಳೋ,ನಗುವುಗಳೋ! ||

    ಕಾಲೋಟವವನೂಟ- ಮಂಕುತಿಮ್ಮ ||

    ReplyDelete
  5. nija akka.. iwugalinda nanna manasse kahi agodu ashte.. aadare besarawada wishaya, bardre samadhana annistu..

    ReplyDelete